ಪ್ರಸರಣ ಸಿದ್ಧಾಂತ

ಸಾಂಸ್ಕøತಿಕ ಅಂಶಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಿಯುವ ಪ್ರತಿಕ್ರಿಯೆಗೆ ಪ್ರಸರಣಕ್ರಿಯೆ ಎಂದು ಹೆಸರು. ಅನಾಗರಿಕರಲ್ಲಿಯೇ ಆಗಲಿ, ಆಧುನಿಕರಲ್ಲಿಯೇ ಆಗಲಿ ಈ ಕ್ರಿಯೆ ಅನಿವಾರ್ಯ. ಇದು ಸಂಸ್ಕøತಿಯ ಮೂಲ ಕ್ರಿಯೆಗಳಲ್ಲಿ ಒಂದು. ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಇದು ಆಗಿಬಿಡುತ್ತದೆ. ಇದು ಒತ್ತಡ ಅಥವಾ ಆತ್ಮೀಯತೆಯಿಂದಲೂ ಆಗಬಹುದು. ಈ ಬಗೆಯ ಬದಲಾವಣೆಯ ಒಂದು ನಿರ್ದಿಷ್ಟ ಬಗೆಯೇ ಪ್ರಸರಣ. ಇದು ಯಾವ ನಿಯಮಗಳ ಮೇಲೆ ನಡೆಯುತ್ತದೆ ಎಂಬುದನ್ನು ತಿಳಿಸುವುದೆ ಪ್ರಸರಣ ಸಿದ್ಧಾಂತದ (ಡಿಪ್ಯೂಷನ್ ತಿಯರಿ) ಉದ್ದೇಶ. ಈ ಸಿದ್ದಾಂತದ ಮೊದಲ ಪ್ರತಿಪಾದಕರು ಮಾನವಶಾಸ್ತ್ರಜ್ಞರು. ಇವರಲ್ಲಿ ಎರಡು ಗುಂಪುಗಳಿವೆ. ಒಂದು, ಜರ್ಮನ್-ಆಸ್ಟ್ರಿಯನ್ ಪಂಥ. ಮತ್ತೊಂದು ಬ್ರಿಟಿಷ್ ಮಾನವಶಾಸ್ತ್ರಜ್ಞರ ಪಂಥ. ಮೊದಲ ಪಂಥದವರು ಪ್ರಸರಣವನ್ನು ಹಲವು ಮೂಲಗಳಿಂದ ಇತರ ಕಡೆಗಳಿಗೆ ಎಂದು ಹೇಳಿದರೆ ಎರಡನೆಯ ಪಂಥದವರು ಏಕಮೂಲವಾದ ಸಂಸ್ಕøತಿಯಿಂದ ಅದರ ಅನಂತ ಪ್ರಸರಣ ಎಂದು ಪ್ರತಿಪಾದಿಸಿದರು. ಪ್ರಸರಣಕ್ರಿಯೆ ಸ್ವದೇಶಿಯ ಹಾಗೂ ಅನ್ಯದೇಶೀಯ ಎಂಬ ಎರಡು ರೀತಿಯಲ್ಲಿ ನಡೆಯುತ್ತದೆ. ಸ್ವದೇಶೀಯವಾದುದು ತನ್ನ ಸಂಸ್ಕøತಿಯೊಳಗಿಂದ ಹೊಸ ಅಥವಾ ಒಂದು ಕಾಲದಲ್ಲಿ ಇದ್ದ ಅಂಶಗಳನ್ನು ಮತ್ತೆ ಪಡೆಯುತ್ತದೆ. ಇದಕ್ಕೆ ಆ ದೇಶದಲ್ಲಿ ಆಗುವ ರಾಜಕೀಯ ಮತ್ತು ಸಾಂಸ್ಕøತಿಕ ಸ್ಥಿತ್ಯಂತರಗಳೇ ಕಾರಣ. ಅನ್ಯದೇಶೀಯ ಪ್ರಸರಣಕ್ರಿಯೆ ವಲಸೆ, ಧರ್ಮಪ್ರಚಾರ, ವ್ಯಾಪಾರ, ದಾಳಿ, ಕ್ರಾಂತಿ ವಸಾಹತುಶಾಹಿಯ ಒತ್ತಡ ಮುಂತಾದವುಗಳಿಂದ ಆಗುತ್ತದೆ. ಭಾರತದಲ್ಲಿ ಇತ್ತೀಚಿನ ಎರಡು ಶತಮಾನಗಳಿಂದ ಆಗಿರುವ ಅನ್ಯದೇಶೀಯ ಸಂಸ್ಕøತಿಯ ಪ್ರಭಾವ ಬ್ರಿಟಿಷ್ ವಸಾಹತುಶಾಹಿಯ ಒತ್ತಡದಿಂದ ಆದದ್ದು. ಅನುಕರಣ ಪ್ರಿಯತೆಯೂ ಪ್ರಸರಣ ಕ್ರಿಯೆಗೆ ಪೋಷಕವಾದ ಮಾಧ್ಯಮ. ಈ ಅನುಕರಣೆಗೆ ಮೂಲ ಪ್ರೇರಣೆ ಒಂದು ಸಂಸ್ಕøತಿಯಲ್ಲಿನ ಅವಕಾಶಗಳ ಕೊರತೆ. ಪ್ರಪಂಚದ ಸಾಂಸ್ಕøತಿಕ ಕೇಂದ್ರವೊಂದರಿಂದ ಅಭಿವೃದ್ಧಿಹೊಂದುತ್ತಿರುವ ಇತರ ಸಂಸ್ಕøತಿಗಳು ಹೊಸ ಬಗೆಯ ಸಾಂಸ್ಕøತಿಕ ಅಂಶಗಳನ್ನು ಸ್ವೀಕಾರ ಮಾಡುವುದುಂಟು. ಈ ಸ್ವೀಕಾರ ವಿಜ್ಞಾನ ವಿಷಯವಾಗಿರಬಹುದು ಅಥವಾ ಸಾಮಾಜಿಕ ಶಿಸ್ತುಗಳಲ್ಲಿಯ ಒಂದಂಶವಾಗಿರಬಹುದು. ಪ್ರಸರಣ ಕ್ರಿಯೆಗಳಲ್ಲೆಲ್ಲ ವ್ಯಾಪಾರ ಮತ್ತು ಧರ್ಮ ಪ್ರಚಾರಕ ಸಂಸ್ಥೆಗಳ ಪ್ರಭಾವ ತೀಕ್ಷ್ಣವಾಗಿರುತ್ತದೆ. ಬ್ರಿಟಿಷರಿಗಿದ್ದ ವ್ಯಾಪಾರ ಪ್ರವೃತ್ತಿಯ ಅವರು ಬೇರೆ ಬೇರೆ ದೇಶಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಳ್ಳಲು ಸಾಧ್ಯವಾಯಿತೆಂಬುದು ಇಂದಿಗೂ ಇತಿಹಾಸ ಸತ್ಯ.

ಬಹಳ ಕಾಲದವರೆಗೆ ಮಾನವಶಾಸ್ತ್ರ ಮತ್ತು ಜಾನಪದಗಳು ಒಟ್ಟೊಟ್ಟಿಗೆ ಬೆಳೆದುವು. ಫ್ರಾನ್ಜ್ ಬೋವಾನಂಥ ಮೇಧಾವಿ ಮಾನವಶಾಸ್ತ್ರಜ್ಞರು ಜನಪದ ಪುರಾಣ ಮತ್ತು ಕಥೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದರು. ಈ ಸಾಮಗ್ರಿಗಳ ಪರಸ್ಪರ ಪ್ರಸರಣ ಕ್ರಿಯೆಯ ಸಾಧ್ಯತೆಗಳನ್ನು ಕಂಡುಕೊಳ್ಳಲು ಯತ್ನಿಸಿದರು. ಪ್ರಸರಣ ಪ್ರೌಢ ಸಂಸ್ಕøತಿಯಿಂದ ಜನಪದ ಸಂಸ್ಕøತಿಯ ಕಡೆಗೆ ಆಗುತ್ತದೆಯೋ ಅಥವಾ ಅದಕ್ಕೆ ವಿರುದ್ಧವಾಗಿ ಆಗುತ್ತದೆಯೋ ಎಂಬ ಅಂಶಗಳನ್ನು ಚರ್ಚಿಸಿದರು. ಜಾನಪದ ಸಾಮಗ್ರಿಗಳೆಲ್ಲ ಪ್ರೌಢ ಸಂಸ್ಕøತಿಯಿಂದ ಜನಪದ ಸಂಸ್ಕøತಿಗೆ ಹರಿದು ಬರುತ್ತವೆ ಎಂಬ ಮಾತನ್ನು ಹಲವರು ಒಪ್ಪಲಿಲ್ಲ. ಅಮೆರಿಕನ್ ಇಂಡಿಯನ್ನರಲ್ಲಿಯ ಪುರಾಣಗಳು ಮತ್ತು ಜನಪದ ಕಥೆಗಳು ಅಲ್ಲಿನ ವಸಾಹತು ಶಾಹಿಗಳ ಜಾನಪದ ಸಾಮಗ್ರಿಗಳಿಗಿಂತ ಭಿನ್ನ ಎಂಬುದನ್ನು ಅವರು ತೋರಿಸಿಕೊಟ್ಟರು. ಒಂದು ಸಂಸ್ಕøತಿಯ ಒಂದು ಅಥವಾ ಅನೇಕ ಅಂಶಗಳು ಒಟ್ಟಾಗಿ ಪ್ರಸರಣಗೊಳ್ಳುತ್ತದೆಯೆ ಇಲ್ಲವೆ ಎಂಬ ಬಗ್ಗೆ ಸಹ ವಿವೇಚನೆ ನಡೆಸಲಾಯಿತು. ಇದು ಸ್ವೀಕಾರ ಮಾಡಬಹುದಾದ ಸಾಂಸ್ಕøತಿಕ ವಿಷಯ ಮತ್ತು ಸ್ವೀಕಾರ ಮಾಡಬಹುದಾದ ಜನಾಂಗವನ್ನು ಅವಲಂಬಿಸಿರುತ್ತದೆಂಬುದು ಅತ್ಯಂತ ಮಹತ್ತ್ವದ ಸಂಗತಿ, ಪ್ರಸರಣ ಅನೇಕ ಸಂದರ್ಭದಲ್ಲಿ ಪರಸ್ಪರ ಕ್ರಿಯೆ ಎಂಬ ಅರಿವೂ ಮೂಡಿತು. ಈ ಬಗೆಯ ಚರ್ಚೆಗೆ ಒಳಗಾದ ಜನಪದ ಪ್ರಕಾರಗಳಲ್ಲಿ ಜನಪದ ಕಥೆ ಮುಖ್ಯ ವಿಷಯವಾಗಿತ್ತು.

ಪ್ರಸರಣ ಸಿದ್ದಾಂತದ ಚರ್ಚೆಯೊಳಕ್ಕೆ ಬಂದ ಮೊದಲ ಜಾನಪದ ಅಂಶಗಳೆಂದರೆ ಪುರಾಣ ಜನಪದ ಕಥೆ. ಜಾನಪದ ಪುನರ್ರಚನಾ ಸಿದ್ದಾಂತ. ಭಾರತೀಯ ಮೂಲ ಸಿದ್ಧಾಂತ, ಬಹುಮೂಲ ಸಿದ್ದಾಂತಗಳೆಲ್ಲ ಪರೋಕ್ಷವಾಗಿ ಜನಪದ ಕಥೆ ಮತ್ತು ಕಥಾಶಯಗಳ ಪ್ರಸರಣವನ್ನು ಒಪ್ಪಿಕೊಂಡರೂ ಅದನ್ನು ದೃಢವಾಗಿ ಪ್ರತಿಪಾದಿಸಲಿಲ್ಲ. ಪ್ರಸರಣ ಸಿದ್ಧಾಂತದ ನಿಚ್ಚಳ ಬಳಕೆ ಕಂಡುಬರುವುದು ಫಿನ್ಲೆಂಡಿನಲ್ಲಿ ಪ್ರಣೀತವಾದ ಚಾರಿತ್ರಿಕ ಭೌಗೋಳಿಕ ಸಿದ್ಧಾಂತದಲ್ಲಿ. ಒಂದು ಜನಪದ ಕಥೆ ಅತಿ ಹೆಚ್ಚು ಚಾರಿತ್ರಿಕ ಭೌಗೋಳಿಕ ಪಾಠಭೇದಗಳನ್ನು ಒಳಗೊಂಡಂತೆ ಅದರ ಮೂಲರೂಪವನ್ನು ಕಂಡುಕೊಳ್ಳುವುದು ಅತಿ ಸುಲಭ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಯಿತು. ಜನಪದ ಕಥೆಯೊಂದು ಅಲೆಗಳ ರೀತಿಯಲ್ಲಿ ನೂರಾರು ಸಾವಿರಾರು ಸಂಖ್ಯೆಗಳಲ್ಲಿ ಪ್ರಸರಣಗೊಳ್ಳಬೇಕೆಂಬುದು ಈ ಸಿದ್ಧಾಂತದ ಒಂದು ನಿಯಮವಾಯಿತು.

ಆಶಯಗಳ ವಿಶಿಷ್ಟತೆ ಮತ್ತು ಪೂರ್ಣ ಸ್ವಾತಂತ್ರ್ಯತೆಯ ಬಗ್ಗೆಯೂ ಚರ್ಚಿಸಲಾಯಿತು. ಅವು ಸ್ವತಂತ್ರವಾಗಿ ಒಂದು ಸಂಸ್ಕøತಿಯಿಂದ ಮತ್ತೊಂದು ಸಂಸ್ಕøತಿಗೆ ಒಂದು ಜಾನಪದ ಅಂಶದಿಂದ ಮತ್ತೊಂದು ಜಾನಪದ ಅಂಶಕ್ಕೆ ಸುಲಭವಾಗಿ ಹೋಗಿ ಸಂಯೋಜನೆಗೊಳ್ಳಬಹುದಾದ ಸಾಧ್ಯತೆಗಳನ್ನು ಒಪ್ಪಿಕೊಳ್ಳಲಾಯಿತು. ಒಂದೇ ಜಾನಪದ ವರ್ಗದೊಳಗೆ ಈ ಆಶಯಗಳ ಹೊಸ ವರ್ಗಗಳನ್ನು ರೂಪಿಸುವುದೂ, ಬೇರೆ ಬೇರೆ ವರ್ಗಗಳಿಂದ ಒಡೆದು ಬಂದ ಆಶಯಗಳ ಹೊಸದೊಂದು ಪ್ರಕಾರದ ಸಿದ್ಧತೆಗೆ ತೊಡಗುವುದೂ ಸಹಜವೆಂದು ಗಣಿಸಲಾಯಿತು. ವಾಚಕ ಪರಂಪರೆಯಲ್ಲಿ ಇದು ಆತ್ಯಂತ ಸಹಜ ಮತ್ತು ಅನಿವಾರ್ಯ ಎಂದು ಹೇಳಲಾಯಿತು.

	ಫಿನ್ನಿಷ್ ಪದ್ಧತಿಯ ಮೂಲ ಕರ್ತೃವಾದ ಕಾರ್ಲೆರ್ರೇಷನ್ ಮತ್ತು ಅದನ್ನು ಪ್ರಾಯೋಗಿಕವಾಗಿ ಬಳಸಿದ ಅಂಟಿ ಅರ್ನೆ ಮತ್ತು ಸ್ಟಿತ್‍ತಾಮ್ಸನ್ ಪ್ರಪಂಚದ ಅನೇಕ ವಿಶಿಷ್ಟ ಕಥಾಮಾದರಿಗಳ ಅಧ್ಯಯನಕ್ಕೆ ಮೇಲಿನ ಎಲ್ಲ ಚಿಂತನೆಯನ್ನು ಬಳಸಿಕೊಂಡರು. ಜನಪದ ಕಥೆಯೊಂದು ಪ್ರಸರಣಗೊಳ್ಳಬಹುದಾದ ಹದಿನೈದು ಸಾಧ್ಯತೆಗಳನ್ನು ಆರ್ನೆ ಮಂಡಿಸಿದ. ವಾಲ್ಟರ್ ಅಂಡ್ರಸನ್ ಪ್ರಸರಣ ಕ್ರಿಯೆಗೆ ಒಳಗಾಗುವ ಜನಪದ ಕಥೆಯ ವಾಚಕ ಪರಂಪರೆಯ ಸಾಧ್ಯತೆಗಳನ್ನು ಮೂರು ವಿಶಿಷ್ಟ ಬಗೆಗಳಲ್ಲಿ ವಿವರಿಸಿದ. ಸ್ಟಿತ್‍ತಾಮ್ಸನ್ ಸಹ ಜನಪದ ಕಥೆಗಳ ವರ್ಗ. ರಚನೆಯಲ್ಲಿ ಅವುಗಳ ಚಾರಿತ್ರಿಕ ಭೌಗೋಳಿಕ ಪ್ರಸರಣವನ್ನು ಒಂದು ಸಹಜ ತತ್ತ್ವವನ್ನಾಗಿ ಪರಿಗಣಿಸಿದ. ಈ ಸಿದ್ಧಾಂತ ಮುಂದೆ ಅದೇ ಬಗೆಯ ಅಳವಡಿಕೆ ಮತ್ತು ಚರ್ಚೆಗೆ ಒಳಗಾಯಿತು. ಜಾನಪದದ ಇತರ ಪ್ರಕಾರಗಳ ಅಧ್ಯಯನಕ್ಕೂ ಈ ಸಿದ್ಧಾಂತವನ್ನು ಬಳಸಿಕೊಳ್ಳಲಾಗಿದೆ.
(ಎಚ್.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ